ಮಕರಸಂಕ್ರಾಂತಿ
	ಮಕರ ಕುಂಭ ಮೀನ ಮೇಷ ವೃಷಭ ಮಿಥುನ ಈ ಆರು ರಾಶಿಗಳಲ್ಲಿ ಸೂರ್ಯ ಉತ್ತರದ ಕಡೆಗೆ ಸಂಚರಿಸುವ ಶಿಶಿರ ವಸಂತ ಗ್ರೀಷ್ಮ ಈ ಮೂರು ಋತುಗಳ ಕಾಲವೇ ಉತ್ತರಾಯಣ. ಪುಷ್ಯಮಾಸದಲ್ಲಿ ಮಕರ ಸಂಕ್ರಮಣದ ದಿವಸ ಉತ್ತರಾಯಣ ಪ್ರಾರಂಭವಾಗುತ್ತದೆಂದು ಪ್ರಾಚೀನ ನಂಬಿಕೆ. ವಾಸ್ತವವಾಗಿ ಇದು ಡಿಸೆಂಬರ್ 22ರ ಸುಮಾರಿಗೆ ಪ್ರಾರಂಭವಾಗುತ್ತದೆ. ಸೂರ್ಯ ಮಕರ ರಾಶಿ ಪ್ರವೇಶಿಸುವ ಕಾಲದಿಂದ ಹನ್ನೆರಡು ಗಂಟೆಗಳ ಕಾಲ ಉತ್ತರಾಯಣ ಪುಣ್ಯಕಾಲವಿರುತ್ತದೆ. ಅದರಲ್ಲೂ ಸಂಕ್ರಮಣಕ್ಕೆ ಸನ್ನಿಹಿತವಾದ ಕಾಲ ಪುಣ್ಯಕರವಾದುದು. ಈ ಸಂಕ್ರಮಣದ ವಾರ ತಿಥಿ ನಕ್ಷತ್ರ ಕರಣಲಗ್ನಗಳಿಂದ ಆಯಾ ವರ್ಷದ ಮಕರ ಸಂಕ್ರಾಂತಿಯ ಫಲಗಳು ತಿಳಿದುಬರುತ್ತವೆ, ಧನುರ್ಮಾಸದ ಬೆಳಗಿನ ಪೂಜೆ ಅಂದಿಗೆ ಮುಗಿಯುತ್ತದೆ. ಎಳ್ಳಿನದಾನ ಮತ್ತು ಭಕ್ಷಣ ಇವೇ ಆ ದಿನದ ವೈಶಿಷ್ಟ್ಯ. ಆ ದಿವಸ ಎಳ್ಳನ್ನು ಬೆಲ್ಲವನ್ನು ಸೇರಿಸಿ ಮನೆಮನೆಗಳಿಗೆ ಹೋಗಿ ಕೊಡುತ್ತಾರೆ. ಇದು ಮಕ್ಕಳ ಪೀಡಾಪರಿಹಾರಕ್ಕಾಗಿ ಎಂಬ ನಂಬಿಕೆಯಿದೆ. ಕೆಲವೆಡೆ ಹಸುಗಳನ್ನು ಅಲಂಕರಿಸಿ ಗುಂಪಾಗಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಕಿಚ್ಚು ಹಾಯಿಸುತ್ತಾರೆ. ಉತ್ತರಾಯಣ ಎಲ್ಲ ಶುಭ ಕಾರ್ಯಗಳಿಗೂ ಪ್ರಶಸ್ತವಾದುದು.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ